ಕ್ಯಾರಿಬೀಯನ್ ಸಮುದ್ರ

ಉತ್ತರದಕ್ಷಿಣ ಅಮೆರಿಕಗಳ ನಡುವೆ ಮೆಕ್ಸಿಕೋ ಖಾರಿಯ ದಕ್ಷಿಣಕ್ಕೆ, ಹರಡಿರುವ ಆಳವಾದ ಉಪಸಾಗರ. ಕ್ಯಾರಿಬೀಯನ್ ಸಮುದ್ರವೂ ಮೆಕ್ಸಿಕೋ ಖಾರಿಯೂ ಉತ್ತರ ದಕ್ಷಿಣ ಅಮೆರಿಕ ಭೂಖಂಡಗಳಿಂದ ಬಹಳ ಮಟ್ಟಿಗೆ ಸಂವೃತವಾಗಿರುವುದರಿಂದ ಇವೆರಡು ಜಲ ಪ್ರದೇಶಗಳನ್ನೂ ಒಂದಾಗಿ ಪರಿಗಣಿಸಿ ಅಮೆರಿಕನ್ ಮೆಡಿಟರೀನಿಯನ್ ಸಮುದ್ರವೆಂದು ಕರೆಯುವುದು. ಜರ್ಮನ್ ಸಾಗರವಿಜ್ಞಾನಿಗಳ ರೂಢಿ. ಉತ್ತರಕ್ಕೆ ವೆಸ್ಟ್ ಇಂಡೀಸಿನ ಗ್ರೇಟರ್ ಅಂಟಿಲಿಸ್ ಮತ್ತು ಪೂರ್ವಕ್ಕೆ ಲೆಸರ್ ಆಂಟಿಲಿಸ್ ದ್ವೀಪಗಳು ದಕ್ಷಿಣಕ್ಕೆ ವೆನಿಜ್ವೀóಲ. ಕೊಲಂಬಿಯ, ಪನಾಮಾ ಮತ್ತು ಕಾಸ್ಟರೀಕ, ಪಶ್ಚಿಮಕ್ಕೆ ನಿಕರಾಗ್ವ, ಹಾಂಡುರಾಸ್ ಗ್ವಾಟಿಮಾಲ ಮತ್ತು ಮೆಕ್ಸಿಕೋ-ಇವು ಇದರ ಮೇರೆಗಳು. ದಕ್ಷಿಣೋತ್ತರವಾಗಿ 380ಮೈ.-700ಮೈ. ಅಗಲವೂ ಪೂರ್ವಪಶ್ಚಿಮವಾಗಿ 1,500 ಮೈ.ಗರಿಷ್ಠ ಉದ್ದವೂ ಇರುವ ಇದರ ವಿಸ್ತೀರ್ಣ ಸು.10,49,500 ಚ.ಮೈ.

ಕ್ಯಾರಿಬೀಯನ್ ಒಂದು ಮಹಾಕಡಲ್ಗಾಲುವೆಯಂತೆ ತೋರುವ ಸಮುದ್ರ. ಆದರೆ ಇದು ಕಾಲುವೆಯಷ್ಟು ಕ್ರಮಬದ್ಧವಾಗಿಲ್ಲ. ವಾಯವ್ಯದಲ್ಲಿ ಇದು ಯೂಕಟ್ಯಾನ್ ಕಡಲ್ಗಾಲುವೆಯ ಮೂಲಕ ಮೆಕ್ಸಿಕೋ ಖಾರಿಯೊಂದಿಗೆ ಕೂಡಿಕೊಂಡಿದೆ. ಪೂರ್ವದಲ್ಲಿ ಉತ್ತರ ಅಟ್ಲಾಂಟಿಕ್ ಸಾಗರದ ಉಷ್ಣವಲಯದ ಭಾಗದೊಂದಿಗೆ ಕೂಡಿಕೊಂಡಿದೆ. ಅಟ್ಲಾಂಟಿಕಿನಿಂದ ಇದು ಬೇರ್ಪಟ್ಟಂತಿರಲು ಲೆಸರ್ ಆಂಟಿಲಿಸ್ ದ್ವೀಪಗಳು ಕಾರಣ. ಈ ದ್ವೀಪಗಳ ನಡುವೆ ಸಮುದ್ರದ ಆಳ 2,000' ಗಿಂತ ಹೆಚ್ಚಿಲ್ಲ. ಆನೆಗಾಡ ಜಲಸಂಧಿಯೇ ಅತ್ಯಂತ ಆಳ (6,000'). ಕ್ಯೂಬದ ಪೂರ್ವದ ತುದಿಗೂ ಹೇಟಿಯ ವಾಯವ್ಯ ಭಾಗಕ್ಕೂ ನಡುವೆ ಇರುವ ಮಾರ್ಗದ ಮುಖದ ಬಳಿಯ ಆಳ 5,500'. ಕ್ಯೂಬದ ಪಶ್ಚಿಮಕ್ಕೆ ಯೂಕಟ್ಯಾನಿನ ಆಳ 6,800'.

ಕ್ಯಾರಿಬೀಯನ್ ನಡುವೆ ಅನೇಕ ನಿಡಿದಾದ ಮಡುಗಳೂ ಈ ಮಡುಗಳ ನಡುನಡುವೆ ಜಲದಡಿಯಲ್ಲಿ ಕಡಿದಾದ ನೆಲದೇಣುಗಳೂ ಉಂಟು. ಈ ಲಕ್ಷಣದಲ್ಲಿ ಇದು ಮೆಡಿಟರೇನಿಯನ್ ಸಮುದ್ರವನ್ನು ಹೋಲುವುದಾದರೂ ಮೆಡಿಟರೇನಿಯನ್‍ಗಿಂತ ಕ್ಯಾರಿಬೀಯನ್ ಹೆಚ್ಚು ಆಳ. ಅಟ್ಲಾಂಟಿಕ್ ಸಾಗರಕ್ಕೂ ಇದಕ್ಕೂ ನಡುವಣ ಸಮುದ್ರಭಾಗವೂ ಹೆಚ್ಚು ಆಳವಾಗಿದೆ. ಆದರೆ ಮೆಡಿಟರೇನಿಯನಿಗಿಂತ ಇದು ಕಿರಿದಾದ ಸಮುದ್ರ.

ಕ್ಯಾರಿಬೀಯನ್ ಮೂಲತಃ ಖಂಡೀಯ ಸಮುದ್ರವಲ್ಲ. ಆದರೆ ಇದು ಸಂಪೂರ್ಣ ಸಾಗರಿಕವೂ ಅಲ್ಲ ರಚನೆಯಲ್ಲೇನೋ ಇದು ಸಾಗರಪಾತ್ರದ ಹಾಗೆಯೇ ಇದೆ. ಭೂರಚನೆಯ ಆಧಾರದ ಮೇಲೆ ಇದನ್ನು ಪೂರ್ವ ಪಶ್ಚಿಮ ಭಾಗಗಳಾಗಿ ವಿಂಗಡಿಸಬಹುದು. ಪಶ್ಚಿಮಭಾಗ ಚಿಕ್ಕದು. ಇದಕ್ಕೆ ಕೇಮ್ಯಾನ್ ಸಮುದ್ರವೆಂದೂ ಹೆಸರುಂಟು. ಈ ಎರಡು ಭಾಗಗಳಿಗೂ ನಡುವೆ-ಹಾಂಡುರಾಸ್ ನಿಕರಾಗ್ವಗಳಿಂದ ಜಮೇಕದ ವರೆಗೆ ಮತ್ತು ಅಲ್ಲಿಂದ ಹೇಟಿಯವರೆಗೆ-ಸಮುದ್ರ ತಳ ಅಗಲವಾಗಿ ಜಗಲಿಯಂತೆ ಹಬ್ಬಿದೆ. ಜಮೇಕದ ಅಗ್ನೇಯಕ್ಕೆ ಇರುವ ಸಮುದ್ರಭಾಗದ ಪಶ್ಚಿಮಪ್ರದೇಶ ಕೊಲಂಬಿಯನ್ ಮತ್ತು ವೆನಿಜ್ವೀóಲನ್ ಪಾತ್ರಗಳಾಗಿ ವಿಂಗಡವಾಗಿದೆ. ಇವುಗಳ ನಡುವೆ ಜಲದ ಅಡಿಯ ನೆಲ ಎತ್ತರವಾಗಿ, ಬೆನ್ನೇಣಿನಿಂದ ಕೂಡಿದ್ದಾಗಿದೆ. ಕ್ಯಾರಿಬೀಯನ್ ಸಮುದ್ರ ಅತ್ಯಂತ ಆಳವಾಗಿರುವುದು ಕೇಮ್ಯಾನ್ ಸಮುದ್ರಭಾಗದಲ್ಲಿ-ಬಾರ್ಟ್‍ಲೆಟ್‍ನಲ್ಲಿ (22,788'). ಇದು ಕ್ಯೂಬಕ್ಕೂ ಜಮೇಕಕ್ಕೂ ನಡುವೆ ಇದೆ.

ಕ್ಯಾರಿಬೀಯನ್ ಸಮುದ್ರಪಾತ್ರದ ಮೇಲ್ಮೈ ತೀವ್ರವಾದ ಏರುತಗ್ಗುಗಳಿಂದ ಕೂಡಿದ್ದು. ಕಡಿದಾದ ಬೆನ್ನೇಣುಗಳ ಬದಿಯಲ್ಲಿ ಅತಿ ಆಳದ ಕೊಳ್ಳಗಳುಂಟು. ಕೆಲವು ಬೆನ್ನೇಣುಗಳು ಸಮುದ್ರದ ನೀರಿನ ಮಟ್ಟದಿಂದ ಮೇಲಕ್ಕೂ ತಲೆ ಎತ್ತಿ ನಿಂತಿವೆ. ಪ್ವೆರ್ಟ ರೀಕೋದ ಬೆನ್ನೆಲುಬಿನಂತಿರುವ ಪರ್ವತಶ್ರೇಣಿಯ ಎತ್ತರ, ಸಮುದ್ರಮಟ್ಟದಿಂದ 4,400'. ಆದರೆ ಅದರ ಬದಿ ಅತಿಕಡಿದಾಗಿದೆ; ಕಡಲ ಕಿನಾರೆಯಿಂದ ಕೇವಲ 55 ಮೈ. ಸಾಗುವುದರೊಳಗೆ 17,000' ಕೆಳಕ್ಕೆ ಇಳಿಯುತ್ತದೆ. ಈ ಇಳಿಜಾರು ಹೀಗೆಯೇ ಮುಂದುವರಿದು, ತೀರದಿಂದ 75 ಮೈ.ಗಳಷ್ಟೇ ದೂರದಲ್ಲಿ ಅಟ್ಲಾಂಟಿಕ್ ಸಾಗರದ ಅತ್ಯಂತ ಆಳಪ್ರದೇಶವಾಗಿ ಪರಿಣಮಿಸುತ್ತದೆ. ಈ ಸ್ಥಳದ ಆಳ ಸಮುದ್ರಮಟ್ಟದಿಂದ 30,180'.

ಕ್ಯಾರಿಬೀಯನ್ ಸಮುದ್ರದಲ್ಲಿ ಭಾರತದ ಚಲನೆ ಕಡಿಮೆ. ಇದು ನಿಲುಕುವ ಗರಿಷ್ಠ ಎತ್ತರ 2'; ಸರಾಸರಿ 1'. ಕ್ಯಾರಿಬೀಯನ್ ಸಮುದ್ರ ಸಂವೃತವಾಗಿರುವುದು ಇದಕ್ಕೆ ಒಂದು ಕಾರಣ. ಅಟ್ಲಾಂಟಿಕ್‍ನಿಂದ ಹರಿದುಬರುವ ಸಾಗರಪ್ರವಾಹ ಕ್ಯಾರಿಬೀಯನ್ ಸಮುದ್ರವನ್ನು ಹಾಯ್ದು ಯೂಕಟ್ಯಾನ್ ಮೂಲಕ ವೇಗವಾಗಿ ಮುಂದುವರಿಯುತ್ತದೆ. ಅಲ್ಲಿ ಇದರ ಕವಲೊಂದು ಪೂರ್ವಾಭಿಮುಖವಾಗಿ ತಿರುಗಿ ಫ್ಲಾರಿಡ ಜಲಸಂಧಿಯ ಮೂಲಕ ಹರಿಯುತ್ತದೆ. ಕ್ಯಾರಿಬೀಯನ್ ಸಮುದ್ರದ ಪ್ರತಿಪ್ರವಾಹಗಳ ಪೈಕಿ ಕೊಲಂಬಿಯನ್ ಪಾತ್ರದ ದಕ್ಷಿಣ ಪಾಶ್ರ್ವದಲ್ಲಿ ಅಪ್ರದಕ್ಷಿಣವಾಗಿ ಹರಿಯುವುದೂ ಕ್ಯೂಬದ ದಕ್ಷಿಣತೀರದ ಬಳಿ ಪೂರ್ವದ ಕಡೆಗೆ ಹರಿಯುವುದೂ ಮುಖ್ಯವಾದಂಥವು. 

ಕ್ಯಾರಿಬೀಯನ್ ಸಮುದ್ರದ ಮೇಲೆ ಈಶಾನ್ಯ ವಾಣಿಜ್ಯ ಮಾರುತಗಳು ಬೀಸುತ್ತವೆ. ಸೆಪ್ಟೆಂಬರಿನಿಂದ ನವೆಂಬರ್‍ವರೆಗೆ ಇವುಗಳ ಬಲ ಸ್ವಲ್ಪ ಕುಗ್ಗಿರುತ್ತದೆ. ಈ ಪ್ರದೇಶದಲ್ಲಿ ಮಂಜು ಅಪರೂಪ. ಗಾಳಿಯ ಉಷ್ಣತೆ ಫೆಬ್ರವರಿಯಲ್ಲಿ ಸು.780 ಫ್ಯಾ. ಸೆಪ್ಟೆಂಬರಿನಲ್ಲಿ ಸು.830 ಫ್ಯಾ. ಕ್ಯಾರಿಬೀಯನ್ ಸಮುದ್ರ ಪ್ರದೇಶದಲ್ಲಿ ಪ್ರತಿವರ್ಷವೂ ಆಗಸ್ಟಿನಿಂದ ಅಕ್ಟೋಬರ್ ವರೆಗಿನ ಕಾಲದಲ್ಲಿ ಭೀಕರ ಚಂಡಮಾರುತಗಳು ಬೀಸುವುದುಂಟು.

ಕ್ಯಾರಿಬೀಯನ್ ಚರಿತ್ರೆ: ಎರಡು ಸಾಗರಗಳ (ಅಟ್ಲಾಂಟಿಕ್ ಮತ್ತು ಪೆಸಿಫಿಕ್) ಮತ್ತು ಎರಡು ಭೂಖಂಡಗಳ (ಉತ್ತರ ದಕ್ಷಿಣ ಅಮೆರಿಕ) ನಡುವೆ ಇರುವ ಕ್ಯಾರಿಬೀಯನಿನ ಸ್ಥಾನಮಹತ್ವದಿಂದಾಗಿ ಅದಕ್ಕೆ ಹೆಚ್ಚಿನ ಐತಿಹಾಸಿಕ ಪ್ರಾಮುಖ್ಯ ಉಂಟಾಗಿದೆ. ಹಳೆಯ ಜಗತ್ತಿಗೆ ಕ್ಯಾರಿಬೀಯನ್ ಸಮುದ್ರದ ಪ್ರಥಮ ಪರಿಚಯವಾದ್ದು ಕೊಲಂಬಸನ ಯಾತ್ರೆಯ ಫಲ. ಇಲ್ಲಿಯ ಲೆಸರ್ ಆಂಟಿಲಿಸ್ ದ್ವೀಪಗಳಲ್ಲಿದ್ದ ಕ್ಯಾರಿಬ್ ಇಂಡಿಯನ್ ಜನರಿಂದಾಗಿ ಇದಕ್ಕೆ ಕ್ಯಾರಿಬೀಯನ್ ಸಮುದ್ರವೆಂಬ ಹೆಸರು ಬಂತು. (ನೋಡಿ- ಕ್ಯಾರಿಬ್). ಇದರ ಆವಿಷ್ಕಾರವಾದ ಅನಂತರ ಸುಮಾರು ಒಂದು ಶತಮಾನ ಕಾಲ ಇಲ್ಲಿ ಸ್ಪ್ಯಾನಿಷರೇ ಏಕಮೇವ ಪ್ರಭುಗಳಾಗಿದ್ದರು. ಸ್ಪೇನಿನ ಸಾಹಸಿಗಳು ಅದೃಷ್ಟವನ್ನರಸುತ್ತ ಹೊರಟು ಕ್ಯಾರಿಬೀಯನ್ ಸಮುದ್ರದ ಸುತ್ತಮುತ್ತಣ ಪ್ರದೇಶದಲ್ಲಿ ಬೆಳ್ಳಿಬಂಗಾರಗಳನ್ನು ಪತ್ತೆಹಚ್ಚಿ ಅವನ್ನು ತಮ್ಮ ದೇಶಕ್ಕೆ ಸಾಗಿಸಿದರು. 16ನೆಯ ಶತಮಾನದಲ್ಲಿ ಇಲ್ಲಿ ಖಾಯಮಾಗಿ ನೆಲಸಿದವರ ಸಂಖ್ಯೆ ಬಹಳ ಕಡಿಮೆ. ಅನಂತರ ಹಿಸ್ಪಾನ್‍ಯೋಲ ದ್ವೀಪದ ಸಾಂಟೊ ಡೊಮಿಂಗೋ ಪ್ರದೇಶವೇ ಸ್ಪ್ಯಾನಿಷರ ಆಕ್ರಮಣ ಕಾರ್ಯದ ಪ್ರಥಮ ಕೇಂದ್ರವಾಗಿದ್ದು, ಅಲ್ಲಿಂದ ಇತರ ದ್ವೀಪಗಳಿಗೆ ಅವರ ಆಕ್ರಮಣ ವಿಸ್ತರಿಸಿತು. ಮೆಕ್ಸಿಕೋ, ಮಧ್ಯ ಅಮೆರಿಕ ಮತ್ತು ದಕ್ಷಿಣ ಅಮೆರಿಕಗಳನ್ನೂ ಅವರು ಪ್ರವೇಶಿಸಿದರು. 1513ರಲ್ಲಿ ಬ್ಯಾಲ್ಬೋವನಿಂದ ಪೆಸಿಫಿಕಿನ ಆವಿಷ್ಕಾರವಾದ ಮೇಲೆ ಆಂಡೀಸ್ ಪರ್ವತ ಪ್ರದೇಶ ಸ್ಪೇನಿನವರ ವಶವಾಯಿತು. ಪೆರು ಮತ್ತು ಅರ್ಜೆಂಟೀನಗಳಿಂದ ಸರಕನ್ನು ಪನಾಮ ಭೂಕಂಠದ ಮೂಲಕ ಸಾಗಿಸಲಾಗುತ್ತಿತ್ತು. ಕ್ಯಾರಿಬೀಯನ್ ಸಮುದ್ರದ ಮೂಲಕ ಸ್ಪೇನಿಗೆ ಸಾಗುತ್ತಿದ್ದ ಸಂಪತ್ತು ಪದೇಪದೇ ಕಡಲು ದರೋಡೆಗೆ ಒಳಗಾಗುತ್ತಿತ್ತು. ಇಂಗ್ಲಿಷ್, ಫ್ರೆಂಚ್ ಮತ್ತು ಡಚ್ ಕಡಲು ದರೋಡೆಕಾರರು ಖಂಡಪ್ರದೇಶಕ್ಕೂ ತಮ್ಮ ದಾಳಿ ವಿಸ್ತರಿಸಿದರು. ಹೆಚ್ಚು ಐಶ್ವರ್ಯಯುಕ್ತವಲ್ಲವೆಂಬ ಕಾರಣದಿಂದ ಸ್ಪ್ಯಾನಿಷರು ತ್ಯಜಿಸಿದ ಲೆಸರ್ ಆಂಟಲಿಸ್‍ಗಾಗಿ ಬ್ರಿಟಿಷರೂ ಫ್ರೆಂಚರೂ ಬಡಿದಾಡಲಾರಂಭಿಸಿದರು. 17ನೆಯ ಶತಮಾನದಲ್ಲಿ ಬ್ರಿಟಿಷ್, ಫ್ರೆಂಚ್, ಡಚ್ ಮತ್ತು ಡೇನಿಷ್ ವಸಾಹತುದಾರರು ಈ ದ್ವೀಪಗಳಲ್ಲಿ ನೆಲಸಿದರು. 1655ರಲ್ಲಿ ಬ್ರಿಟಿಷರು ಸ್ಪೇನಿನಿಂದ ಜಮೇಕವನ್ನು ಕಿತ್ತುಕೊಂಡರು. ಸ್ಪೇನಿನ ಭದ್ರಕೋಟೆ ಬಿರುಕು ಬಿಟ್ಟಿತು. ಚಿನ್ನಬೆಳ್ಳಿಗಳನ್ನು ಸ್ವದೇಶಕ್ಕೆ ಸಾಗಿಸುವ ಸ್ಪೇನಿನ ನೀತಿಗೆ ಧಕ್ಕೆ ಒದಗಿತು. ಐಶ್ವರ್ಯ ತುಂಬಿದ ಹಡಗುಗಳು ಶತ್ರುಗಳ ವಶವಾಗಿ ಸ್ಪೇನಿಗೆ ತುಂಬ ನಷ್ಟ ಸಂಭವಿಸಿತು.

ಕ್ಯಾರಿಬೀಯನ್ ಪ್ರದೇಶ ಐರೋಪ್ಯರ ವಶವಾದಾಗ ಅವರ ವ್ಯಾಪಾರ ಕುದುರಿತು. ಸಕ್ಕರೆಯೇ ಮುಂತಾದ ಬೆಳೆಗಳ ತೋಟಗಳಲ್ಲಿ ದುಡಿಯಲು ಅವರು ಗುಲಾಮರನ್ನು ತಂದರು. ಗುಲಾಮ ಪದ್ಧತಿ ಬೆಳೆಯಿತು. 1697ರಲ್ಲಿ ಫ್ರಾನ್ಸ್ ಪಶ್ಚಿಮ ಹಿಸ್ಪಾನ್‍ಯೋಲವನ್ನು ಸ್ಪೇನಿನಿಂದ ಪಡೆದುಕೊಂಡಿತು. ಫ್ರಾನ್ಸಿನ ಕ್ರಾಂತಿಯ ಕಾಲದಲ್ಲಿ ಈ ವಸಾಹತಿನಲ್ಲಿ ನೀಗ್ರೋಗಳು ದಂಗೆಯೆದ್ದು ಫ್ರಾನ್ಸಿನ ಹಿಡಿತದಿಂದ ಬಿಡುಗಡೆ ಪಡೆದರು. ಹೇಟಿ ದ್ವೀಪ 1804ರಲ್ಲಿ ಸ್ವತಂತ್ರವಾಯಿತು. ಇದಾದ ಅನಂತರ ಸ್ಪೇನಿನ ಹಿಡಿತ ಸಡಿಲವಾಗಿ ಕ್ಯಾರಿಬೀಯನ್‍ನಲ್ಲಿದ್ದ ಸ್ಪಾನಿಷ್ ವಸಾಹತುಗಳೆಲ್ಲ ಒಂದೊಂದಾಗಿ ಸ್ವತಂತ್ರವಾದುವು. 1850ರ ಹೊತ್ತಿಗೆ ಕ್ಯಾರಿಬೀಯನ್ ಸುತ್ತ ಮೆಕ್ಸಿಕೋ, ಗ್ವಾಟಿಮಾಲ, ಹಾಂಡುರಸ್, ನಿಕರಾಗ್ವ, ಕಾಸ್ಟರೀಕ, ಕೊಲಂಬಿಯ. ವೆನಿಜ್ವೀóಲ, ಹೇಟಿ, ಡಾಮಿನಿಕನ್ ಗಣರಾಜ್ಯ ಮುಂತಾದ ಸ್ವತಂತ್ರ ರಾಷ್ಟ್ರಗಳು ಉದಿಸಿದವು. 20ನೆಯ ಶತಮಾನದ ಹೊತ್ತಿಗೆ ಪ್ವೆರ್ಟ ರೀಕೊ ಸ್ಪೇನಿನ ಕೈಬಿಟ್ಟು, ಅಮೆರಿಕ ಸಂಯುಕ್ತಸಂಸ್ಥಾನಕ್ಕೆ ಸೇರಿತು. ಕ್ಯೂಬ ಸ್ವತಂತ್ರವಾಯಿತು. ಕೊಲಂಬಿಯದಿಂದ ಪನಾಮಾ ಬೇರ್ಪಟ್ಟು ಸ್ವತಂತ್ರವಾಯಿತು.

1849ರಲ್ಲಿ ಕ್ಯಾಲಿಫೋರ್ನಿಯದಲ್ಲಿ ಬಂಗಾರವನ್ನು ಕಂಡುಹಿಡಿಯಲಾಗಿ ಕ್ಯಾರಿಬೀಯನ್ ಸಮುದ್ರ ಮತ್ತು ಪೆಸಿಫಿಕ್ ಸಾಗರಗಳ ಮಧ್ಯೆ ಇರುವ ಪನಾಮಾ ಭೂಕಂಠದ ಪ್ರಾಮುಖ್ಯ ಹೆಚ್ಚಿತು. ಭೂಕಂಠದಲ್ಲಿ ಒಂದು ರೈಲುಮಾರ್ಗವನ್ನು ನಿರ್ಮಿಸಲಾಯಿತು. ಭೂಕಂಠವನ್ನು ಕತ್ತರಿಸಿ ಕಾಲುವೆ ನಿರ್ಮಿಸುವುದು ಅಗತ್ಯವಾಯಿತು. 1880ರಲ್ಲಿ ಒಂದು ಫ್ರೆಂಚ್ ಕಂಪನಿ ಪನಾಮಾ ಕಾಲುವೆ ನಿರ್ಮಿಸಲಾರಂಭಿಸಿತಾದರೂ ಆರ್ಥಿಕ ಮುಗ್ಗಟ್ಟಿನಿಂದ ಮತ್ತು ರೋಗರುಜಿನಗಳ ದೆಸೆಯಿಂದ ಆ ಕೆಲಸ ಅಷ್ಟಕ್ಕೇ ನಿಂತಿತು. 1903ರ ಪನಾಮಾ ಕ್ರಾಂತಿಯ ಅನಂತರ ಸಂಯುಕ್ತ ಸಂಸ್ಥಾನ ಅಲ್ಲಿ ಕಾಲುವೆ ನಿರ್ಮಾಣದಲ್ಲಿ ತೊಡಗಿತು. ಪನಾಮ ಕಾಲುವೆ 1914ರಲ್ಲಿ ಪ್ರಾರಂಭವಾದಾಗ ದಕ್ಷಿಣ ಅಮೆರಿಕದ ಪಶ್ಚಿಮ ಕರಾವಳಿಯವರಿಗೂ ಉತ್ತರ ಅಮೆರಿಕದ ಸಂಯುಕ್ತ ಸಂಸ್ಥಾನದ ಪೂರ್ವಪಶ್ಚಿಮ ಕರಾವಳಿಯವರಿಗೂ ಅದೊಂದು ವರವಾಗಿ ಪರಿಣಮಿಸಿತು. ಪೂರ್ವದಿಂದ ಪಶ್ಚಿಮಕ್ಕೂ ಪಶ್ಚಿಮದಿಂದ ಪೂರ್ವಕ್ಕೂ ಸಮುದ್ರದ ಮೂಲಕ ಹೋಗಬೇಕಾದಾಗಲೆಲ್ಲ ದಕ್ಷಿಣ ಅಮೆರಿಕವನ್ನು ಬಳಸುವುದು ತಪ್ಪಿತು. ಕಾಲುವೆಯ ನಿರ್ಮಾಣದಿಂದ ಸಂಯುಕ್ತಸಂಸ್ಥಾನದ ದಕ್ಷಿಣದ ಎಲ್ಲೆ ವಿಸ್ತರಿಸಿತೆಂದು ಹೇಳಬಹುದು. ಸಂಯುಕ್ತ ಸಂಸ್ತಾನದ ವಿದೇಶಾಂಗ ನೀತಿಯ ಮೇಲೆ ಉಂಟಾದ ಪರಿಣಾಮವೂ ಅಧಿಕ. ಕ್ಯೂಬ ಮತ್ತು ಪ್ವೆರ್ಟ ರೀಕೊಗಳಲ್ಲಿ ಸಂಯುಕ್ತ ಸಂಸ್ಥಾನ ನೌಕಾನೆಲೆಗಳನ್ನು ಹೊಂದಿತ್ತು. ಅದು ಡಚ್ ವೆಸ್ಟ್ ಇಂಡೀಸನ್ನು 1917ರಲ್ಲಿ ಕೊಂಡಿತು. ಯೂರೋಪಿನಿಂದ ಪನಾಮಾ ಕಾಲುವೆಗೆ ಅತಿ ಸಮೀಪ ಮಾರ್ಗವಾದ ಆನೆಗ್ಯಾಡ ಜಲಸಂಧಿಯನ್ನು ರಕ್ಷಿಸುವುದು ವರ್ಜಿನ್ ದ್ವೀಪಗಳ ಮುಖ್ಯ ಬಂದರಾದ ಸೇಂಟ್ ಥಾಮಸ್ ಬಂದರಿನಿಂದ ಅದಕ್ಕೆ ಸುಲಭವಾಯಿತು. ಎರಡನೆಯ ಮಹಾಯುದ್ಧದ ಕಾಲದಲ್ಲಿ ಕ್ಯಾರಿಬೀಯನ್ ಸಮುದ್ರದ ಸನ್ನಿವೇಶದ ಮಹತ್ತ್ವದ ದೃಷ್ಟಿಯಿಂದ ಈ ಪ್ರದೇಶದಲ್ಲಿ ಅದು ಅನೇಕ ನೌಕಾನೆಲೆಗಳನ್ನೂ, ವಿಮಾನ ನಿಲ್ದಾಣಗಳನ್ನೂ ಸ್ಥಾಪಿಸಿತು. ಕ್ಯಾರಿಬೀಯನ್ ಪ್ರದೇಶ ಅನೇಕ ವರ್ಷಗಳ ವರೆಗೆ ಸಂಯುಕ್ತಸಂಸ್ಥಾನದ ಆರ್ಥಿಕ ನಿಯಂತ್ರಣಕ್ಕೆ ಒಳಗಾಗಿತ್ತು. ಇದರ ಜೊತೆಗೆ ಸಂಯುಕ್ತಸಂಸ್ಥಾನದ ಸೈನ್ಯಗಳು ಸಹ ಈ ಪ್ರದೇಶಗಳಲ್ಲಿ ಬೀಡು ಬಿಟ್ಟಿದ್ದುವು. ಕ್ಯಾರಿಬೀಯನ್ ಸಮುದ್ರದ ಆಯಕಟ್ಟಿನ ಪ್ರಾಮುಖ್ಯದಿಂದಾಗಿ ಅಮೆರಿಕ ಸಂಯುಕ್ತಸಂಸ್ಥಾನ ಪದೇ ಪದೇ ಅದರ ಸುತ್ತಮುತ್ತಣ ರಾಜ್ಯಗಳ ರಾಜಕೀಯದಲ್ಲಿ ಪ್ರವೇಶಿಸುತ್ತಿತ್ತು. ಅಮೆರಿಕ ಸಂಯುಕ್ತಸಂಸ್ಥಾನದ ಆರ್ಥಿಕ ರಾಜಕೀಯ ಪ್ರಭಾವಗಳಿಂದ ಬಿಡಿಸಿಕೊಳ್ಳುವುದು ಅನೇಕ ರಾಜ್ಯಗಳ ಉದ್ದೇಶವಾಗಿದೆ. ಕ್ಯಾರಿಬೀಯನ್ ಸಮುದ್ರವನ್ನು ಬಳಸಿರುವ ಹನ್ನೊಂದು ಗಣರಾಜ್ಯಗಳು ಮತ್ತು ಅನೇಕ ಸಣ್ಣ ದ್ವೀಪಗಳು ಸಕ್ಕರೆ, ಬಾಳೆ, ಕಾಫಿ, ಕೋಕೋ, ತೈಲ, ಕಬ್ಬಿಣ ಅದುರು, ಬಾಕ್ಸೈಟ್ ಮುಂತಾದ ಅನೇಕ ಪದಾರ್ಥಗಳ ದೃಷ್ಟಿಯಿಂದ ಪ್ರಾಮುಖ್ಯ ಗಳಿಸಿವೆ. ಪ್ಲಾಂಟೇಷನ್ ವ್ಯವಸಾಯದ ಬೆಳವಣಿಗೆಯಿಂದಾಗಿ ಜನಸಂಖ್ಯೆಯೂ ಅಧಿಕವಾಗಿದೆ. ಎರಡನೆಯ ಮಹಾಯುದ್ಧ ಕಾಲದಲ್ಲಿ ಜರ್ಮನ್ ಜಲಾಂತರ್ಗಾಮಿ ನೌಕೆಗಳು ಇಲ್ಲಿ ಅನೇಕ ಹಡಗುಗಳನ್ನು ಮುಳುಗಿಸಿ ಅರೂಬಾದ ಎಣ್ಣೆ ಶೋಧನಾಲಯದ ಮೇಲೆ ಷೆಲ್ ದಾಳಿ ನಡೆಸಿದ್ದುವು.							(ಬಿ.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ